ದೇಶಮುಖ್, ದುರ್ಗಾಬಾಯಿ
1909 - .  ಭಾರತದ ಖ್ಯಾತ ಸಮಾಜ ಸುಧಾರಕಿ, ಸ್ವಾತಂತ್ರ್ಯ ಹೋರಾಟಗಾರ್ತಿ.  ಹುಟ್ಟಿದ್ದು ಆಂಧ್ರ ಪ್ರದೇಶದ ರಾಜ ಮಹೇಂದ್ರಿಯಲ್ಲಿ.  ತಂದೆ ಬಿ.ವಿ.ಎನ್. ರಾವ್, ತಾಯಿ ಕೃಷ್ಣ ವೇಣಮ್ಮ. ಚಿಕ್ಕಂದಿನಲ್ಲೇ ಓದುಬಿಟ್ಟು ಗಾಂಧಿಯವರ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು.  ವರ್ಧಾ ಆಶ್ರಮದಲ್ಲಿದ್ದಾಗ (1934) ಗೋರಾ ಎಂಬ ಗುಪ್ತ ನಾಮದಿಂದ ಪ್ರಸಿದ್ಧರಾಗಿರುವ ಜಿ. ರಾಮಚಂದ್ರರಾವ್ ಅವರ ನೇತೃತ್ವದಲ್ಲಿ ಇಂಗ್ಲಿಷ್ ವ್ಯಾಸಂಗವನ್ನು ಕೈಕೊಂಡು ಎಂ.ಎ. ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿ (1940) ಪಾರಿತೋಷಕಗಳನ್ನು ಪಡೆದರು.  ಮದ್ರಾಸು ವಿಶ್ವ ವಿದ್ಯಾನಿಲಯದ ಲಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ (1942) ವಕೀಲವೃತ್ತಿಯಲ್ಲಿ ಕೆಲಕಾಲ ಇದ್ದರು.  ಆಂಧ್ರ ವಿಶ್ವವಿದ್ಯಾಲಯ ಇವರಿಗೆ 1963 ರಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿತು.  ಭಾರತ ಸರ್ಕಾರದ ಹಣಕಾಸಿನ ಸಚಿವರಾಗಿದ್ದ ಚಿಂತಾಮಣ್ ದೇಶಮುಖರವರೊಡನೆ ಇವರ ವಿವಾಹವಾದದ್ದು 1953 ರಲ್ಲಿ.

ದುರ್ಗಾಬಾಯಿ ಇನ್ನೂ ಚಿಕ್ಕವರಿರುವಾಗಲೇ ಕಾಕಿನಾಡದಲ್ಲಿ ಬಾಲಿಕಾ ಹಿಂದಿ ಪಾಠಶಾಲೆಯನ್ನು ಪ್ರಾರಂಭಿಸಿದರು(1921). ಹಿಂದಿ, ಸಂಗೀತ, ನೂಲುವುದು ಮತ್ತು ನೇಯುವುದನ್ನು ಕಲಿಸುವುದು ಆ ಶಾಲೆಯ ಉದ್ದೇಶವಾಗಿತ್ತು.  ದಕ್ಷಿಣ ಭಾರತದಲ್ಲಿ ಹಿಂದಿ ಪ್ರಚಾರಕ್ಕೆ ಇವರು ಚಿರಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಘಟಿಕೋತ್ಸವದಲ್ಲಿ (1944) ಮಹಾತ್ಮ ಗಾಂಧೀಜಿಯವರು ಇವರಿಗೆ ಚಿನ್ನದ ಪದಕವನ್ನು ಕೊಟ್ಟು ಗೌರವಿಸಿದರು. ಮಹಾತ್ಮ ಗಾಂಧೀಜಿಯವರ ಆಣತಿಯಂತೆ ದುರ್ಗಾಬಾಯಿ ಆಂಧ್ರದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿದರು(1930). ಇದರಿಂದ 3 ವರ್ಷ ಕಾರಾಗೃಹದಲ್ಲಿರಬೇಕಾಯಿತು. ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲುವ ತಾಮ್ರಪತ್ರವನ್ನು ಭಾರತ ಸರ್ಕಾರ ಇತ್ತೀಚಿಗೆ ಇವರಿಗೆ ನೀಡಿ ಗೌರವಿಸಿದೆ.

1946 ರಲ್ಲಿ ರಚಿತವಾದ ಭಾರತದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ದುರ್ಗಾಬಾಯಿ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ.
ದುರ್ಗಾಬಾಯಿ ಸಂಘಟನಾ ಚತುರೆ.  1950 ರಲ್ಲಿ ಆಂಧ್ರಪ್ರದೇಶದ ರಾಯಲ್ ಸೀಮೆಯಲ್ಲಿ ತಲೆದೋರಿದ ಕ್ಷಾಮ ಕಾಲದಲ್ಲಿ ಪರಿಹಾರ ಕಾರ್ಯಗಳನ್ನು ವ್ಯವಸ್ಥೆ ಮಾಡುವಲ್ಲಿ ದಕ್ಷಿಣ ಮಹಾರಾಷ್ಟ್ರದಲ್ಲಿ 1953 ರಲ್ಲಿ ಕ್ಷಾಮಪರಿಹಾರ ಕೇಂದ್ರಗಳನ್ನು ಏರ್ಪಡಿಸುವಲ್ಲಿ ಇವರು ಶ್ಲಾಘ್ಯವಾಗಿ ಕೆಲಸ ಮಾಡಿದ್ದಾರೆ.

ದುರ್ಗಾಬಾಯಿ 1950 - 54 ರ ಅವಧಿಯಲ್ಲಿ ಅಖಿಲ ಭಾರತ ಯೋಜನಾ ಮಂಡಳಿಯ ಸದಸ್ಯರಾಗಿ ಮಹಿಳೆಯರ ಕಲ್ಯಾಣಕ್ಕೆ ವಿಶೇಷವಾಗಿ ಶ್ರಮಿಸಿದರು.  ತತ್ಫಲವಾಗಿ ಕೇಂದ್ರ ಸಮಾಜ ಕಲ್ಯಾಣ ಮಂಡಳಿ ರಚಿತವಾಯಿತು,  1953 - 62 ರ ವರೆಗೆ ಆ ಮಂಡಳಿಯ ಅಧ್ಯಕ್ಷರಾಗಿ ಇವರು ಮಹಿಳೆಯರ ಅಭ್ಯುದಯಕ್ಕೆ ಹೆಚ್ಚಿನ ಸೇವೆ ಸಲ್ಲಿಸಿದರು.  ಹಲವಾರು ಅನಿವಾರ್ಯ ಅಡೆತಡೆಗಳ ನಿಮಿತ್ತ ವ್ಯಾಸಂಗ ಮಾಡಲಾಗದ ಮಹಿಳೆಯರು ಮತ್ತು ವಿಧವೆಯರು ಎಸ್.ಎಸ್.ಎಲ್.ಸಿ. ವರೆಗೆ ಮನೆಯಲ್ಲೇ ವ್ಯಾಸಂಗ ಮಾಡುವ ಸಂಕ್ಷಿಪ್ತಾವಧಿಯ ಶಿಕ್ಷಣಯೋಜನೆ ಈಕೆ ಮಹಿಳಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆ.  ಸಾವಿರಾರು ಮಂದಿ ಮಹಿಳೆಯರು ಈ ಯೋಜನೆಯ ಉಪಯೋಗ ಪಡೆದಿರುವರು.  ಅವರಲ್ಲಿ ಕೆಲವರು ತಮ್ಮ ಶಿಕ್ಷಣವನ್ನು ವಿಶ್ವವಿದ್ಯಾನಿಲಯದ ಮಟ್ಟದಲ್ಲೂ ಮುಂದುವರಿಸಿರುವರು.

ದುರ್ಗಾಬಾಯಿ ಮಹಿಳೆಯರ ಶಿಕ್ಷಣ್ಕಕ್ಕೆ ವಯಸ್ಕರ ನಿರಕ್ಷರತಾ ನಿರ್ಮೂಲನಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ.  ಭಾರತ ಸರ್ಕಾರ ಅಖಿಲ ಭಾರತ ಮಟ್ಟದಲ್ಲಿ ರಚಿಸಿದ ಹಲವಾರು ಸಮಿತಿಗಳ ಸದಸ್ಯರಾಗಿ ಮಹಿಳೆಯರ ಪ್ರಗತಿಗೆ ಶ್ರಮಿಸಿದ ಕೀರ್ತಿ ಈಕೆಗೆ ಸಲ್ಲಬೇಕು.  ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದೇಶಗಳಿಗೆ ಹೋಗಿ ಭಾರತವನ್ನು ಪ್ರತಿನಿಧಿಸುವ ಸದವಕಾಶವೂ ಇವರಿಗೆ ದೊರೆತಿದೆ.

ಆಂಧ್ರ ಮಹಿಳಾ ಸಭಾ 1937ರಲ್ಲಿ ದುರ್ಗಾಬಾಯಿ ಹುಟ್ಟುಹಾಕಿದ ಸಂಸ್ಥೆ.  ಅದು ಅಂದಿನಿಂದ ಇಂದಿನ ವರಗೆ ಮಕ್ಕಳ ಮತ್ತು ಮಹಿಳೆಯರ ಶಿಕ್ಷಣ, ಆರೋಗ್ಯ ಕಲ್ಯಾಣ ಮತ್ತು ಪುನರ್ವಸತಿಗೆ ದುಡಿಯುತ್ತಿದೆ. ಸಭೆ ಕಳೆದ 38 ವರ್ಷಗಳಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಮದ್ರಾಸು ಹೈದರಾಬಾದು ಮತ್ತು ಹಿಂದುಳಿದ ಪ್ರದೇಶಗಳಾದ ಮಹಬೂಬ್‍ನಗರ ಮತ್ತು ಸಂಗರೆಡ್ಡಿಗಳಲ್ಲಿ ತನ್ನ ಸಂಸ್ಥೆಯನ್ನು ತೆರೆದಿದೆ. ಈ ಸಂಸ್ಥೆಯ ಬೆಳ್ಳಿಯ ಹಬ್ಬ ಭಾರತದ ಅಂದಿನ ರಾಷ್ಟ್ರಾಧ್ಯಕ್ಷ ರಾಧಾಕೃಷ್ಣನ್‍ರವರ ಅಧ್ಯಕ್ಷತೆಯಲ್ಲಿ ನಡೆಯಿತು.  ಸಭೆಯ ಆಶ್ರಯದಲ್ಲಿ  ಶಿಶುವಿಹಾರ, ಉಪಧ್ಯಾಯರ ತರಬೇತಿ, ಮಹಿಳಾ ವಿದ್ಯಾಲಯ, ದಾದಿಯರ ತರಬೇತಿ, ನರ್ಸಿಂಗ್ ಹೋಂ, ವೈದ್ಯಕೀಯ ಕೇಂದ್ರ, ಅಂಗವಿಕಲರ ಪರಿಹಾರ ಕೇಂದ್ರ, ಪ್ರವಾಸಿಗಳ ವಸತಿ ಗೃಹ,  ಪೌಷ್ಟಿಕ ಆಹಾರ ಬಳಕೆಯ ಪ್ರಚಾರ ಘಟಕ, ಆಹಾರ ಕೆಡದಂತೆ ರಕ್ಷಿಸುವ ವಿಧಾನಗಳು ಕಂಡುಹಿಡಿಯುವ ಸಂಶೋಧನಾ ಕೇಂದ್ರ, ಪ್ರಾದೇಶಿಕ ಕುಶಲ ಕೈಗಾರಿಕೆಗಳ ತರಬೇತಿ ಸಂಸ್ಥೆ. ಕುಟುಂಬ ಯೋಜನೆ ಮತ್ತು ಕ್ರಿಯಾತ್ಮಕ ಸಾಕ್ಷರತಾ ಮುಂತಾದ ಘಟಕಗಳು ಸೇವೆ ಸಲ್ಲಿಸುತ್ತಿವೆ.  ವಿಶ್ವವಿದ್ಯಾನಿಲಯ ಧನಸಹಾಯ ಮಂಡಳಿ ಭಾರತ ಸರ್ಕಾರ ವ್ಯಾಪಾರಿ ಸಂಸ್ಥೆಗಳು ಮತ್ತು  ಇತರ ಉದಾರಿ ಮಹನೀಯರು ಮೇಲ್ಕಂಡ ಕಾರ್ಯಚಟುವಟಿಕೆಗಳಿಗೆ ನೆರವು ನೀಡುತ್ತಿದ್ದಾರೆ.

ಯುನೆಸ್ಕೊ ವಿಶ್ವಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ ಭಾರತ ಸರ್ಕಾರ ಶಕ್ತಿಮಾನ್ ಆಹಾರತಳಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರೈತರ ಸಾಕ್ಷರತಾ ಯೋಜನೆಯನ್ನು ಕೈಕೊಂಡಿದೆಯಷ್ಟೆ. ಈ ಯೋಜನೆಯನ್ನು ಇಡೀ ಭಾರತದಲ್ಲೇ ಮೊತ್ತಮೊದಲಾಗಿ ಆಂಧ್ರ ಪ್ರದೇಶಗಳಲ್ಲಿ ಕಾರ್ಯಗತ ಮಾಡುತ್ತಿರುವ ಏಕೈಕ ಖಾಸಗಿ ಸಂಸ್ಥೆ ಆಂಧ್ರ ಮಹಿಳಾಸಭಾ. ಇದು ಆಂಧ್ರ ಸರ್ಕಾರದ ಶಿಫಾರಸ್ಸಿನ ಮೇಲೆ 8 ಜಿಲ್ಲೆಗಳಲ್ಲಿ ರೈತರ ಸಾಕ್ಷರತಾ ಕಾರ್ಯಕ್ರಮವನ್ನು ನಡೆಸುತ್ತಿದೆ.

1964ರಿಂದ 1967ರ ವರಗೆ ಕುರುಡರ ಪರಿಹಾರ ಸಂಘದ ಅಧ್ಯಕ್ಷಿಣಿಯೂ ಅನಂತರ 1971ರ ವರಗೆ ಸದಸ್ಯರಾಗಿಯೂ ಅವರ ಕಲ್ಯಾಣಕ್ಕೆ ಹೆಚ್ಚಿನ ಸೇವೆ ಸಲ್ಲಿಸಿದ ಪರಿಣಾಮವಾಗಿ ದುರ್ಗಾಬಾಯಿಗೆ 1973ರಲ್ಲಿ ರಸ್ಟನ್ ನೇರ್ವಾಂಜಿ ಅಲ್ಪಿವಾಲ ಸ್ಮಾರಕ ಬಹುಮಾನ ದೊರೆತಿದೆ.

ಗಾಂಧೀಜಿಯವರ ತತ್ತ್ವ ಮತ್ತು ಆದರ್ಶಗಳ ಚಿಂತನೆ ಮತ್ತು ಪರಿಪಾಲನೆಯ ಬಗ್ಗೆ ವಿಚಾರ ವಿನಿಮಯ ಮಾಡಲು ಆಂಧ್ರಪ್ರದೇಶದ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿಶತಾಬ್ದಿ ಭವನಗಳನ್ನು ಸ್ಥಾಪಿಸಲು ಸಾರ್ವಜನಿಕ ಮತ್ತು ಸರ್ಕಾರದ ಮೂಲಗಳಿಂದ 13 ಲಕ್ಷ ರೂಪಾಯಿ ಸಂಗ್ರಹಿಸಿ 13 ಗಾಂಧಿಶತಾಬ್ದಿ ಭವನಗಳನ್ನು ನಿರ್ಮಿಸಲು ದುರ್ಗಾಬಾಯಿ ಕಾರಣರಾಗಿದ್ದಾರೆ.
ಅಂತರರಾಷ್ಟ್ರೀಯ ಕ್ಷೇತ್ರಕ್ಕೆ ಸಹ ದುರ್ಗಾಬಾಯಿಯವರ ಸೇವೆ ಸಂದಿದೆ. ಆ ಕ್ಷೇತ್ರಕ್ಕೆ ಸಂಬಂಧಿಸದಂತೆ ಶಿಕ್ಷಣ ಮತ್ತು ಸಮಾಜ ಕಲ್ಯಾಣಕ್ಕೆ ರಚಿತವಾದ ಸಮಿತಿಗಳಲ್ಲಿದ್ದು ಸೇವೆ ಸಲ್ಲಿಸಿದ ಕೀರ್ತಿ ಇವರದು. ಇಡೀ ಏಷ್ಯಕ್ಕೆ ಶಿಕ್ಷಣ ಯೋಜನೆಯನ್ನು ರೂಪಿಸಲು 1965ರಲ್ಲಿ ಯುನೆಸ್ಕೊ ರಚಿಸಿದ ಅಂತರರಾಷ್ಟ್ರೀಯ ಸಮಿತಿಯ ಸಲಹೆಗಾರರಾಗಿ ಇವರು ಕೆಲಸ ಮಾಡಿದ್ದಾರೆ.
ನಿರಕ್ಷರತಾ ನಿವಾರಣೆಗೆ ದುರ್ಗಾಬಾಯಿ ಸಲ್ಲಿಸಿರುವ ಸೇವೆಯನ್ನು  ಪರಿಗಣಿಸಿ ಅಖಿಲ ಭಾರತ ವಯಸ್ಕರ ಶಿಕ್ಷಣ ಮಂಡಳಿ 1971ರ ಸಾಲಿನ ನೆಹರು ಸಾಕ್ಷರತಾ ಪ್ರಶಸ್ತಿಯನ್ನು ಇವರಿಗೆ ನೀಡಿದೆ.

ದುರ್ಗಾಬಾಯಿಯವರ ಬಹುಮುಖ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 1975ರ ಗಣರಾಜ್ಯ ದಿನ ಇವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
(ಟಿ.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ